HEADLINES

ನಾಳೆ ಪುತ್ತೂರಿನಲ್ಲಿ ನೀಟ್ ಹಗರಣ ಮತ್ತು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ವಿದ್ಯಾರ್ಥಿ ಜಾಥಾ

ನೀಟ್ ಪರೀಕ್ಷೆಯಲ್ಲಿ ನಡೆದ ಅಪಾರ ಹಗರಣ ಮತ್ತು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ, ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ, ಪುತ್ತೂರು ವತಿಯಿಂದ ದಿನಾಂಕ 25.07.2026 ಶನಿವಾರ ಬೆಳಿಗ್ಗೆ 11.00 ಗಂಟೆಗೆ ಶಾಂತಿಯುತ ಜಾಥಾ ಹಾಗೂ ಪ್ರತಿಭಟನಾ ಸಮಾವೇಶ ನಡೆಯಲಿದೆ.



ಜಾಥಾ ವಿವರಗಳು:
ಜಾಥಾ ಹೊರಡುವ ಸ್ಥಳ: ಗಾಂಧಿ ಕಟ್ಟೆ, ಪುತ್ತೂರು

ಸಮಾವೇಶ ಸ್ಥಳ: ಅಮರ್ ಜವಾನ್ ಜ್ಯೋತಿ ಸ್ಮಾರಕ, ಮಿನಿ ವಿಧಾನ ಸೌಧ ಬಳಿ, ಪುತ್ತೂರು

ಈ ಹಗರಣದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿದೆ. 20ಕ್ಕೂ ಅಧಿಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದರ ನಂತರ ದೇಶದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ರವರಾಗಲೀ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಾಗಲೀ ಈ ಬಗ್ಗೆ ಯಾವುದೇ ಮಾತನ್ನೂ ಆಡದಿರುವುದು ಮತ್ತು ಆತ್ಮಹತ್ಯೆಗೊಳಗಾದ ಕುಟುಂಬಗಳಿಗೆ ಯಾವುದೇ ಸಾಂತ್ವನವನ್ನಾಗಲೀ, ಪರಿಹಾರವನ್ನಾಗಲೀ ನೀಡದಿರುವುದು ಖಂಡನೀಯವಾಗಿದೆ. 

ಈ ಎಲ್ಲವನ್ನು ಖಂಡಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಕಳೆದ 20 ದಿನಗಳಿಗೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ದೆಹಲಿಯಲ್ಲಿ ನಡೆದ ಸಂಸತ್ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರಕಾರ ಅಮಾನುಷವಾಗಿ ನಡೆಸಿದ ದೌರ್ಜನ್ಯ ದೇಶದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬಗೆದ ವಂಚನೆಯಾಗಿದೆ.

ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ ಕೇಂದ್ರ ಸರಕಾರದ ಈ ಸರ್ವಾಧಿಕಾರೀ ನಡವಳಿಕೆಯನ್ನು ಖಂಡಿಸಿ, ನೀಟ್ ಹಣರಣದ ಕೇಂದ್ರಬಿಂದುವಾದ ದೇಶದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಪೊಲೀಸ್ ದೌರ್ಜನ್ಯಗಳಿಗೆ ಕಾರಣಕರ್ತರಾದ ಗೃಹ ಸಚಿವ ಅಮಿತ್ ಶಾರವರ ರಾಜೀನಾಮೆಯನ್ನು ಆಗ್ರಹಿಸಿ ಈ ಪ್ರತಿಭಟನಾ ಜಾಥಾ ಮತ್ತು ಪ್ರತಿಭಟನಾ ಸಭೆ ನಡೆಸಲಾಗುವುದು.

 ಪುತ್ತೂರಿನ ಸಮಸ್ತ ವಿದ್ಯಾರ್ಥಿಗಳೂ, ಪೋಷಕರು ಹಾಗೂ ಸಾರ್ವಜನಿಕರು ಮತ್ತು ಎಲ್ಲಾ ಪತ್ರಕರ್ತ ಬಂಧುಗಳು ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬೆಂಬಲವನ್ನು ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಆಯೋಜಕರು ಈ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು