HEADLINES

ಸಿಜೆಪಿ ಆಯ್ತು, ಈಗ E20 ಜನತಾ ಪಾರ್ಟಿ ವೈರಲ್: ಸಾಮಾಜಿಕ ಜಾಲತಾಣದಲ್ಲಿ 71,500ಕ್ಕೂ ಅಧಿಕ ಫಾಲೋವರ್‌ಗಳು; ಏನಿದು ಅಭಿಯಾನ?

 ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ 'E20 ಜನತಾ ಪಾರ್ಟಿ' ಹೆಸರಿನ ಹೊಸ ಆನ್‌ಲೈನ್ ಅಭಿಯಾನ ಭಾರೀ ವೈರಲ್ ಆಗಿದೆ. ಇದು ಯಾವುದೇ ಅಧಿಕೃತ ರಾಜಕೀಯ ಪಕ್ಷವಲ್ಲ. E20 (20% ಎಥನಾಲ್ ಮಿಶ್ರಿತ) ಪೆಟ್ರೋಲ್ ಜೊತೆಗೆ 100% ಶುದ್ಧ ಪೆಟ್ರೋಲ್ (E0) ಆಯ್ಕೆಯನ್ನೂ ವಾಹನ ಸವಾರರಿಗೆ ಲಭ್ಯವಾಗುವಂತೆ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಈ ಅಭಿಯಾನ ಆರಂಭವಾಗಿದೆ.

ಅಭಿಯಾನಕ್ಕೆ ಬೆಂಬಲ ನೀಡುತ್ತಿರುವವರು, ಎಲ್ಲಾ ವಾಹನಗಳು E20 ಇಂಧನಕ್ಕೆ ಸಮರ್ಪಕವಾಗಿ ಹೊಂದಿಕೆಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ವಾಹನ ಮಾಲೀಕರಿಗೆ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಇರಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. Instagram ನಲ್ಲಿ 44,700ಕ್ಕೂ ಹೆಚ್ಚು ಹಾಗೂ X (ಹಿಂದಿನ Twitter) ನಲ್ಲಿ 26,800ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಈ ಅಭಿಯಾನ, ಒಟ್ಟಾರೆ 71,500ಕ್ಕೂ ಅಧಿಕ ಬೆಂಬಲಿಗರನ್ನು ಹೊಂದಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಪರಿಸರ ಸ್ನೇಹಿ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ E20 ಇಂಧನಕ್ಕೆ ಪ್ರೋತ್ಸಾಹ ನೀಡುತ್ತಿರುವ ನಡುವೆಯೇ, ಗ್ರಾಹಕರಿಗೆ ಶುದ್ಧ ಪೆಟ್ರೋಲ್ ಆಯ್ಕೆಯನ್ನೂ ಮುಂದುವರಿಸಬೇಕು ಎಂಬುದು E20 ಜನತಾ ಪಾರ್ಟಿ ಅಭಿಯಾನದ ಪ್ರಮುಖ ಆಗ್ರಹವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು