HEADLINES

ಜಮ್ಮು-ಕಾಶ್ಮೀರದಲ್ಲಿ ಮಳೆಯ ಆರ್ಭಟ ; ಭಾರೀ ಭೂಕುಸಿತದಿಂದ ಹೆದ್ದಾರಿ ಬಂದ್, ಮಣ್ಣಿನಡಿ ಸಿಲುಕಿದ ವಾಹನಗಳು

ಜಮ್ಮು: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಭೂಕುಸಿತ ಹಾಗೂ ಹಠಾತ್ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕ್ವಾರ್ ಜಲವಿದ್ಯುತ್ ಯೋಜನೆ ಸಮೀಪ ಗುಡ್ಡ ಕುಸಿದು ಅಪಾರ ಪ್ರಮಾಣದ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಜಾರಿಬಿದ್ದಿವೆ.

ಈ ಘಟನೆ ಪರಿಣಾಮ ಡೋಡಾ–ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿ (NH-244)ಯಲ್ಲಿ ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸ್ಥಳದಲ್ಲಿ ನಿಂತಿದ್ದ ಹಲವು ವಾಹನಗಳು ಮಣ್ಣು ಮತ್ತು ಅವಶೇಷಗಳಡಿ ಸಿಲುಕಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಹಾಗೂ ಆಡಳಿತಾಧಿಕಾರಿಗಳು ಧಾವಿಸಿದ್ದು, ರಸ್ತೆ ತೆರವು ಮತ್ತು ಸಂಚಾರ ಪುನಃ ಆರಂಭಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಈ ಘಟನೆಯಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

ಇದೇ ವೇಳೆ, ಹವಾಮಾನ ಇಲಾಖೆ ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಇನ್ನೂ ಭಾರೀ ಮಳೆಯ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದೆ. ಗುಡ್ಡಗಾಡು ಪ್ರದೇಶಗಳಿಗೆ ಪ್ರಯಾಣಿಸುವವರು ಎಚ್ಚರಿಕೆ ವಹಿಸುವಂತೆ ಹಾಗೂ ಅಗತ್ಯವಿಲ್ಲದಿದ್ದರೆ ಪ್ರಯಾಣವನ್ನು ಮುಂದೂಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು