HEADLINES

ಮುಂಬೈನಲ್ಲಿ ಭಾರೀ ಮಳೆ ಅಬ್ಬರ: ಕಟ್ಟಡ ಕುಸಿದು 6 ಸಾವು, ಶಾಲೆಗಳಿಗೆ ರಜೆ

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಮನ್‌ಖುರ್ಡ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳು ಕುಸಿದ ಪರಿಣಾಮ ಐವರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ನಿರಂತರ ಮಳೆಯ ಹಿನ್ನೆಲೆಯಲ್ಲಿ ಹಲವು ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂಬೈನ ಎಲ್ಲಾ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಸಾಧ್ಯವಾದರೆ ಸಿಬ್ಬಂದಿಯಿಂದ ಮನೆಯಿಂದಲೇ ಕೆಲಸ (Work From Home) ಮಾಡಿಸುವಂತೆ ಆಡಳಿತ ಸಲಹೆ ನೀಡಿದೆ. 

ಇದೇ ವೇಳೆ, ಭೂಕುಸಿತದ ಕಾರಣ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇಯ ಕೆಲವು ಭಾಗಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ತುರ್ತು ಸೇವಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹವಾಮಾನ ಇಲಾಖೆ ಮುಂದಿನ ಕೆಲವು ಗಂಟೆಗಳವರೆಗೆ ಭಾರೀ ಮಳೆಯ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಅಗತ್ಯವಿಲ್ಲದಿದ್ದರೆ ಹೊರಗೆ ತೆರಳದಂತೆ ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು