HEADLINES

ಮಾಣಿ ಸಮೀಪ ಶಾಲಾ ಬಸ್ ಮೇಲೆ ಮರ ಉರುಳಿ ದುರಂತ: 6 ವರ್ಷದ ಬಾಲಕಿ ಸಾವು, ಹಲವು ವಿದ್ಯಾರ್ಥಿಗಳಿಗೆ ಗಾಯ

ಪುತ್ತೂರು/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಾಣಿ ಸಮೀಪದ ಬರಿಮಾರುದಲ್ಲಿ ಬುಧವಾರ ಬೆಳಿಗ್ಗೆ ನಡೆದ ಭೀಕರ ದುರ್ಘಟನೆಯಲ್ಲಿ ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿಬಿದ್ದ ಪರಿಣಾಮ 6 ವರ್ಷದ ಬಾಲಕಿ ಮೃತಪಟ್ಟಿದ್ದು, ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.


ಭಾರೀ ಮಳೆ ಹಾಗೂ ಬಿರುಗಾಳಿಯ ನಡುವೆ ರಸ್ತೆ ಬದಿಯಲ್ಲಿದ್ದ ಮರ ಏಕಾಏಕಿ ಬಸ್ ಮೇಲೆ ಬಿದ್ದ ಪರಿಣಾಮ ಬಸ್‌ನ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ. ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಗಾಯಾಳು ವಿದ್ಯಾರ್ಥಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು.

ಗಾಯಗೊಂಡ ವಿದ್ಯಾರ್ಥಿಗಳಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆ ಸೇರಿದಂತೆ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.

ಘಟನಾ ಸ್ಥಳಕ್ಕೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ದುರ್ಘಟನೆ ಜಿಲ್ಲೆಯಾದ್ಯಂತ ದುಃಖದ ವಾತಾವರಣ ಸೃಷ್ಟಿಸಿದ್ದು, ಮಳೆಗಾಲದಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು